Current View
ನವಿಲಿನಿಂದ ಗರುಡನೆಡೆಗೆ
ನವಿಲಿನಿಂದ ಗರುಡನೆಡೆಗೆ
₹ 199+ shipping charges

Book Description

ಪಿಡಿಓ ಕರ್ತವ್ಯ ನಿರ್ವಹಿಸುತ್ತಲೇ ಸ್ನಾತಕೋತ್ತರ ಅಧ್ಯಯನದ ಜೊತೆಗೆ ಕವಿತೆಗಳನ್ನು ಬರೆಯುತ್ತ ಅಕ್ಷರಗಳ ಕೃಷಿಯನ್ನು ಹಚ್ಚಿಕೊಂಡವರು ಕಲ್ಲನಗೌಡ ಪಾಟೀಲ. ಗದಗ ಜಿಲ್ಲೆಯ ಗ್ರಾಮದಲ್ಲಿನ ರಕ್ತದೊತ್ತಡ ಹಾಗೂ ಮಧುಮೇಹ ಹರಡುವಿಕೆ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಅಧ್ಯಯನದ ಪ್ರೆಸೆಂಟೇಷನ್ನಿಗಾಗಿ ಗೆಳೆಯನೊಂದಿಗೆ ಥೈಲ್ಯಾಂಡ ದೇಶದ ರಾಜಧಾನಿ ಬ್ಯಾಂಕಾಕಿನ ‘ಸಾರ್ವಜನಿಕ ಆರೋಗ್ಯ ವಿಜ್ಞಾನಗಳ 19 ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ ಪಾಟೀಲರ ಸ್ವಾನುಭವಗಳನ್ನೊಳಗೊಂಡ ‘ನವಿಲಿನಿಂದ ಗರುಡನೆಡೆಗೆ’ ಎಂಬ ಪ್ರವಾಸ ಕಥನವಿದು. ಇದರ ಆರಂಭ ಒಂದು ಆತ್ಮಕಥನದ ಶೈಲಿಯಲ್ಲಿದೆ. ಎಲ್ಲ ವೃತ್ತಿಪರ ವಿಧ್ಯಾರ್ಥಿಗಳ ಹಾವಭಾವದ ಮಧ್ಯೆ ಬಿ.ಎ ಪದವಿಗೆ ಇರುವ ಮೌಲ್ಯವನ್ನು ‘ಮೀನು ಮಾರುಕಟ್ಟೆಯಲ್ಲಿ ತರಕಾರಿ ಮಾರಲು ಹೋದವನ ಸ್ಥಿತಿ’ ಎಂದು ಬಣ್ಣಿಸುವ ಇವರು ‘ಅನ್ನ’ ಮತ್ತು ‘ಹಣ’ ಎರಡನ್ನೂ ಸೇರಿಸಿ ‘ಹನ್ನ’ ಎಂಬ ಹೊಸ ನುಡಿಗಟ್ಟನ್ನೇ ಸೃಷ್ಟಿಸಬಲ್ಲಷ್ಟು ಕ್ರಿಯಾಶೀಲರು.   ಭರತ ಭೂಮಿಯ ಹೊರತಾಗಿ ಥೈಲ್ಯಾಂಡಿನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿ ಹೆಜ್ಜೆ ಇಟ್ಟಾಗ ಅತ್ಯಂತಿಕ ಪುಳಕ ಅನುಭವಿಸುವ ಲೇಖಕ, ಇಮಿಗ್ರೇಶನ್ ಕ್ಯೂನಲ್ಲಿ ನಿಂತಾಗ ಹುಬ್ಬಳ್ಳಿಯ ಸಿದ್ಧಾರೂಢರ ಶಿವರಾತ್ರಿಯ ದರ್ಶನಕ್ಕೆ ಸಾಲಿನಲ್ಲಿ ನಿಂತ ಅನುಭವವನ್ನು ಅವಾಹಿಸಿಕೊಳ್ಳುವದು ಅಪ್ಯಾಯಮಾನವಾಗಿದೆ. ಪಾಟೀಲರು ತಮ್ಮ ಸಂಶೋಧನಾ ಪೋಸ್ಟರನ್ನು ಹೊರಡುವ ಅವಸರದಲ್ಲಿ ಮನೆಯಲ್ಲೂ, ಮುಂದೆ ಮುಂಬಯಿ ವಿಮಾನ ನಿಲ್ದಾಣದ ಲಗೇಜ್ ಸ್ಕ್ಯಾನಿಂಗ್ ಸ್ಥಳದಲ್ಲೂ ಮತ್ತು ಮೂರನೇ ಬಾರಿ ಬ್ಯಾಂಕಾಕ್ ಇಮಿಗ್ರೇಷನ್ ಸೆಂಟರಿನಲ್ಲೂ, ಕೊನೆಗೆ ಸೆವೆನ್ ಲೆವೆನ್ ಅಂಗಡಿಯಲ್ಲೂ ಮರೆತು ಬಿಟ್ಟದ್ದನ್ನು ‘ತಂಬಿಗೆ ಒಯ್ಯಲು ಮರೆತು ಮಜ್ಜಿಗೆ ತರಲು ಹೋದಂತೆ’ ಎಂಬ ರೂಪಕದಲ್ಲಿಯೇ ಅಭಿವ್ಯಕ್ತಿಸುವದು ಮೆಚ್ಚುವಂತಿದೆ.   ಬ್ಯಾಂಕಾಕಿನ ಡೆಮಾಕ್ರಸಿ ಮಾನ್ಯುಮೆಂಟ್, ದೂಡುವ ಅಂಗಡಿ ಇರಿಸಿಕೊಂಡಿರುವ ಬರ್ಮಾ ದೇಶದ ಬೆಂಗಾಲಿ ಮನೆ ಭಾಷೆಯ ಮಹಮದ್ ಹುಸೇನ್, ಅತೀ ಹಳೆಯ ಬೌದ್ಧ ಮಂದಿರ ವಾಟ್ ಮಹಾರಥ, ನಾಗನನ್ನು ಹಿಡಿದುಕೊಂಡ ಗರುಡನ ಶಿಲ್ಪ ರಚನೆ, ಪಚ್ಚೆ ಬುದ್ಧನ ದೇವಸ್ಥಾನ ಹಾಗೂ ಥಾಯ್ ರಾಮಾಯಣದ ವರ್ಣಚಿತ್ರ ಗ್ಯಾಲರಿ ಹೀಗೆ ಅಲ್ಲಿಯ ಇನ್ನೂ ಹಲವಾರು ಆಕರ್ಷಣೆಯ ಕೇಂದ್ರಗಳನ್ನು ತಮ್ಮ ಮನಸ್ಸಿನ ಕನ್ನಡಿಯಲ್ಲಿ ಸೆರೆ ಹಿಡಿದು ಇಲ್ಲಿ ರಸಗವಳದಂತೆ ನೀಡಿದ ಪಾಟೀಲರಿಗೆ, ಇನ್ನೂ ಅನೇಕ ದೇಶಗಳ ಸುತ್ತುವ ಅವಕಾಶ ದೊರೆತು, ತಮಗಾದ ವಿಶಿಷ್ಟ ಅನುಭವಗಳನ್ನು ಹೀಗೆಯೇ ಸಹೃದಯರಿಗೆ ಹಂಚುವಂತಾಗಲಿ ಎಂದು ಬಹು ಅಕ್ಕರೆಯಿಂದ ಹಾರೈಸುವೆ.   -ಸುನಂದಾ ಕಡಮೆ