ಆಯುರ್ವೇದವು ಒಂದು ಮಹಾಸಾಗರವಿದ್ದಂತೆ. ಅದನ್ನು ಕಲಿತು ಮುಗಿಸುವುದು ಅಥವಾ ಪೂರ್ಣವಾಗಿ ಅರಿತುಕೊಳ್ಳುವುದು ಅಸಾಧ್ಯ ಮಾತು. ಆದರೂ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಂಡು, ಜೀವನವನ್ನು ಸುಗಮವಾಗಿಸಿಕೊಳ್ಳಲು ಸಂಪೂರ್ಣ ಶಾಸ್ತ್ರವನ್ನು ಅರಿಯಬೇಕೆಂದೇನಿಲ್ಲ. ಪುರಾತನ ಭಾರತೀಯ ವೈದ್ಯಕೀಯ ವಿಜ್ಞಾನ - ಆಯುರ್ವೇದದ ತತ್ತ್ವಗಳನ್ನು ಆಧರಿಸಿ ಆರೋಗ್ಯಕರ ಜೀವನಶೈಲಿಯನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ವಿಚಾರದ ಕುರಿತು ಈ ಪುಸ್ತಕವು ನಿಮಗೆ ಮಾರ್ಗದರ್ಶನವನ್ನು ನೀಡುತ್ತದೆ.
ಈ ಪುಸ್ತಕವು ಒಳಗೊಂಡ ಮಾಹಿತಿಗಳು ಶಾಸ್ತ್ರೀಯ ಆಯುರ್ವೇದ ತತ್ತ್ವಗಳನ್ನು ಆಧರಿಸಿದ್ದು, ಇಲ್ಲಿ ನಮೂದಿಸಿರುವ ವಿಚಾರಗಳಿಗೆ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿರುವ ಶ್ಲೋಕಗಳ ಮೂಲಕ ಪುರಾವೆಗಳನ್ನು ನೀಡಲಾಗಿದೆ. ಜೊತೆಗೆ ಸಂಬಂಧಪಟ್ಟ ಸಂಶೋಧನಾ ಲೇಖನಗಳನ್ನೂ ಉಲ್ಲೇಖಿಸಲಾಗಿದೆ. ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಿಂದ ತೊಡಗಿ, ನಿಮಗೆ ಹೆಚ್ಚು ಪರಿಚಿತವಲ್ಲದ ಪದಾರ್ಥಗಳ ಕುರಿತಾದ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ.