ಎನ್. ರೋಹಿತ್ ಸಿಂಹ
ಸಮರ್ಪಣೆ:
ಈ ದೇಶದ ಬೆನ್ನೆಲುಬಾದ ರೈತರು ಮತ್ತು ನಮೆಲ್ಲರನ್ನ ಕಾಯುವ ಯೋಧರಿಗೆ ಈ ಗೆಲುವು ಕವನ ಸಂಕಲನವನ್ನು ಸಮರ್ಪಿಸುತ್ತೇನೆ.
ಲೇಖಕರ ನುಡಿ:
ನನ್ನ ಆತ್ಮೀಯ ಗೆಳೆಯರು ಹಾಗು ಹಿತೈಷಿಗಳಾದ ಶ್ರೀ ಈಶ್ವರ್ ರವರು ಒಂದು ಸಂಜೆ ಕರೆ ಮಾಡಿ "ತಮ್ಮ ಕವನ ಸಂಕಲನಕ್ಕೆ ಗೆಲುವು ಎಂದು ಹೆಸರು ಸೂಚಿಸಿದ್ದೇನೆ" ಎಂದು ಹೇಳಿದರು.. ಕಾಕತಾಳಿಯವೋ ಅಥವಾ ನಮ್ಮ ಸ್ನೇಹದ ಅರ್ಥ ಗರ್ಭಿತವಾದ ಒಳ ಭಾಷೆಯೋ ತಿಳಿಯದು ಈ ಕವನ ಸಂಕಲನವನ್ನು ಈ ದೇಶದ ರೈತರಿಗೆ ಭತ್ತು ಯೋಧರಿಗೆ ಸಮರ್ಪಣೆ ಮಾಡಬೇಕು ಎಂದುಕೊಂಡಿದ್ದೆ, ನನಗೆ ಆ ಹೆಸರೇ ಅತ್ಯಂತ ಉಚಿತವೆನ್ನಿಸಿತು, ಏಕೆಂದರೆ ರೈತನಿಗೆ ಮಳೆಬಂದು ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿ ಫಸಲಿಗೆ ಉತ್ತಮ ಆದಾಯ ಬಂದರೆ ಅದು ಅವನ ಗೆಲುವು. ಹಾಗೆಯೆ ಪ್ರತಿದಾಳಿ ತಡೆದು ಶತ್ರುವನ್ನು ಮಟ್ಟಹಾಕಿದಾಗಲೇ ಸೈನಿಕನಿಗೆ ಗೆಲುವು.
ಗೆಲುವು ಈ ಒಂದು ಪದದ ಹುಡುಕಾಟದಲ್ಲಿ ನಾವು ನಮ್ಮ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಅನುಭವಿಸಿರುತ್ತೀವಿ, ಅದು ಬಿಸಿಲು ಕುದುರೆ ಇದ್ದಂತೆ, ದೂರದಲ್ಲಿ ನಿಂತು ಕೈಬೀಸಿ ಕರೆಯುವ ಹಾಗೆ ಭಾಸವಾಗಿ ಹತ್ತಿರ ಹೋದಾಗ ಆ ಗೆಲುವೆಂಬುದು ಇನ್ನಷ್ಟು ದೂರ ಹೋಗುತ್ತದೆ. ನಾನು ಸಹ ಸಾಹಿತ್ಯ ಲೋಕದಲ್ಲಿ ಈ ಗೆಲುವನ್ನು ಬೆನ್ನತ್ತಿ ಹೊರಟಿದ್ದೇನೆ. ಅಂದರೆ ಯಾವುದೇ ಪ್ರಶಸ್ತಿಯಲ್ಲ, ಸನ್ಮಾನವಲ್ಲ, ಬಿರುದು ಬಾವಳಿಗಳಲ್ಲ ಆದರೆ ಅದಕ್ಕೂ ಮೀರಿದ ತುಟ್ಟತುದಿಯ ಅನುಭವ, ಸಾರ್ಥಕತೆ ಹಾಗು ಆಹ್ಲಾದಕರ ಮನಸ್ಥಿತಿ ಅಷ್ಟೇ. ಈ ನನ್ನ ಪಯಣದಲ್ಲಿ ಅದೆಷ್ಟೋ ಕವನಗಳು ಮನಸ್ಸಿಗೆ ಬಂದು ಹಾಗೆ ಹಾರಿ ಹೋಗಿವೆ, ಕಾಗದದಲ್ಲಿ ಬಂಧಿಸಿದರೂ ಕಸದ ಬುಟ್ಟಿ ಸೇರಿವೆ ಕಾರಣ ನೀವೇ ಊಹಿಸಬಲ್ಲಿರಿ. ಈ ಎರಡು ಸೀಮೆಯನ್ನು ದಾಟಿ ನನ್ನ ಮನಸ್ಸಿನ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕವನಗಳು ಮಾತ್ರ ಮುದ್ರಣಕ್ಕೆ ಹೊರಟಿವೆ, ನಿಮ್ಮ ಕೈ ಸೇರಿವೆ.
ಈ ಸಮಯದಲ್ಲಿ, ನನ್ನ ಪ್ರಥಮ ಕವನ ಸಂಕಲನದಿಂದ ಹಿಡಿದು ಇಂದಿಗೂ ನನಗೆ ಧೈರ್ಯ ಮತ್ತು ಬೆಂಬಲವಾಗಿ ನಿಂತಿರುವ ಆತ್ಮೀಯರು ಶ್ರೀ ಕಾ.ನಾ. ಶ್ರೀನಿವಾಸ್ ರವರಿಗೆ ಚಿರಋಣಿ, ಸಾಹಿತ್ಯಾನುಭವ ಅಷ್ಟಿಲ್ಲದ ನನಗೆ ತಮ್ಮ ಅಮೂಲ್ಯ ಸಮಯ ಮೀಸಲಿಟ್ಟು ಪ್ರತಿಯೊಂದು ಪದವನ್ನು ಸೂಕ್ಷ್ಮವಾಗಿ ಅವಲೋಕಿಸಿ ಗೆಲುವು ಕವನ ಸಂಕಲನಕ್ಕೆ ಮುನ್ನುಡಿ ಬರೆದು ಆಶಿರ್ವಧಿಸಿರುವ ಅನುಭವಿಗಳು, ಮಾರ್ಗದರ್ಶಕರು ಆದ ಶ್ರೀಯುತ ಎಂ.ಎಸ್. ಮಣಿ ಯವರಿಗೆ ನನ್ನ ಹೃದಯಾಳದ ವಂದನೆಗಳು. ಅಂತೆಯೇ ಬೆನ್ನುಡಿ ಬರೆದುಕೊಡಬೇಕೆನ್ನುವ ನನ್ನ ಮನವಿಗೆ ತಕ್ಷಣ ಸ್ಪಂದಿಸಿ ನನಗೆ ಅಗತ್ಯ ಸಲಹೆಗಳನ್ನು ನೀಡಿ ಕವನಗಳು ಮತ್ತಷ್ಟು ಆಕರ್ಷಕವಾಗಿ ಮೂಡಿಬರಲು ಕಾರಣರಾದ ಶ್ರೀಯುತ ಮಂಜುನಾಥ ಬಮ್ಮನಕಟ್ಟಿ (ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಶ್ರೀ ವಿಜಯ ಸಾಹಿತ್ಯ ಪ್ರಶಸ್ತಿ ಇನ್ನು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ) ರವರಿಗೆ ನನ್ನ ವಂದನೆಗಳನ್ನು ಹೇಳಲು ಬಯಸುತ್ತೇನೆ.
ಹಾಗೆಯೆ ಈ ನನ್ನ ಕಾವ್ಯ ಪಯಣದಲ್ಲಿ ಜೊತೆಗೆ ಹೆಜ್ಜೆ ಹಾಕಿದ ಕುಟುಂಬವರ್ಗದವರಿಗೂ, ಮಿತ್ರರಿಗೂ, ನೇರವಾಗಿ ಅಥವ ಪರೋಕ್ಷವಾಗಿ ಸಹಕರಿಸಿ ಹರಸಿದವರಿಗೆಲ್ಲರಿಗೂ ನನ್ನ ನಮಸ್ಕಾರಗಳು. ಕನ್ನಡ ಭಾಷೆಗೆ ಕಿರು ಸೇವೆಯಾಗಿ ಸಿದ್ಧಪಡಿಸಿರುವ ಈ ಕವನ ಸಂಕಲನವನ್ನು ತಾವು ಓದಿ ಅನ್ಯರಿಗೂ ತಿಳಿಸಿ ಪ್ರೋತ್ಸಾಹಿಸುವಿರೆಂದು ನನ್ನ ನಂಬಿಕೆ ಹಾಗಾಗಿ ನನ್ನ ಎಲ್ಲಾ ಓದುಗರಿಗೂ ನಮನಗಳು. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ನನ್ನ ವಿಳಾಸ ಕೆಳಗೆ ಇರುತ್ತದೆ. ಯುವಕವಿಗಳಿಗೆ ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕೃಷಿಯನ್ನು ಸಮೃದ್ಧಿಯಾಗಿಸಿ ವಿಜೃಂಭಿಸಿ ರಾರಾಜಿಸುವ ಹಾಗೆ ತಾವೆಲ್ಲರೂ ಹರಸಬೇಕಾಗಿ ಈ ಮೂಲಕ ಪ್ರಾರ್ಥಿಸುತ್ತೇನೆ. ಜೈ ಕನ್ನಡ ಜೈ ಕರ್ನಾಟಕ ಜೈ ಭಾರತ